unfoldingWord 05 - ವಾಗ್ದಾನದ ಮಗನು
Obris: Genesis 16-22
Broj skripte: 1205
Jezik: Kannada
Publika: General
Svrha: Evangelism; Teaching
Features: Bible Stories; Paraphrase Scripture
Status: Approved
Skripte su osnovne smjernice za prevođenje i snimanje na druge jezike. Treba ih prilagoditi prema potrebi kako bi bili razumljivi i relevantni za svaku različitu kulturu i jezik. Neki korišteni pojmovi i pojmovi možda će trebati dodatno objašnjenje ili će ih se čak zamijeniti ili potpuno izostaviti.
Tekst skripte
ಅಬ್ರಾಮನು ಮತ್ತು ಸಾರಯಳು ಕಾನಾನಿಗೆ ಬಂದು ಹತ್ತು ವರ್ಷಗಳಾದ ನಂತರವೂ, ಅವರಿಗೆ ಇನ್ನೂ ಮಗುವಿರಲಿಲ್ಲ. ಹಾಗಾಗಿ ಅಬ್ರಾಮನ ಹೆಂಡತಿಯಾದ ಸಾರಾಯಳು ಅವನಿಗೆ, "ದೇವರು ನನಗೆ ಮಕ್ಕಳಾಗುವಂತೆ ಮಾಡಲಿಲ್ಲ ಮತ್ತು ಈಗ ನಾನು ಮಕ್ಕಳನ್ನು ಪಡೆಯಲು ತುಂಬಾ ವೃದ್ಧಳಾಗಿರುವ ಕಾರಣ, ಇಗೋ ನನ್ನ ದಾಸಿಯಾದ, ಹಾಗರಳು ಇಲ್ಲಿದ್ದಾಳೆ, ಅವಳನ್ನು ಮದುವೆಯಾಗು, ಆಕೆಯು ನನಗಾಗಿ ಮಗುವನ್ನು ಪಡೆಯಬಹುದು" ಎಂದು ಹೇಳಿದಳು.
ಆದ್ದರಿಂದ ಅಬ್ರಾಮನು ಹಾಗರಳನ್ನು ಮದುವೆಯಾದನು. ಹಾಗರಳಿಗೆ ಗಂಡು ಮಗುವಾಯಿತು ಮತ್ತು ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. ಆದರೆ ಸಾರಾಯಳು ಹಾಗರಳ ಬಗ್ಗೆ ಅಸೂಯೆಪಟ್ಟಳು. ಇಷ್ಮಾಯೇಲನು ಹದಿಮೂರು ವರ್ಷ ವಯಸ್ಸಿನವನಿದ್ದಾಗ, ದೇವರು ಮತ್ತೆ ಅಬ್ರಾಮನೊಂದಿಗೆ ಮಾತನಾಡಿದನು.
ದೇವರು, "ನಾನು ಸರ್ವಶಕ್ತನಾದ ದೇವರು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ" ಎಂದು ಹೇಳಿದನು. ಆಗ ಅಬ್ರಾಮನು ಅಡ್ಡಬಿದ್ದನು. ದೇವರು ಅಬ್ರಾಮನಿಗೆ, "ನೀನು ಅನೇಕ ಜನಾಂಗಗಳ ತಂದೆಯಾಗುವಿ ಮತ್ತು ನಾನು ನಿನಗೂ ಮತ್ತು ನಿನ್ನ ಸಂತತಿಗೂ ಕಾನಾನ್ ದೇಶವನ್ನು ಸ್ವಾಸ್ತ್ಯವಾಗಿ ಕೊಡುವೆನು ಮತ್ತು ನಾನು ಎಂದೆಂದಿಗೂ ಅವರಿಗೆ ದೇವರಾಗಿರುವೆನು, ನಿನ್ನ ಕುಟುಂಬದ ಪ್ರತಿಯೊಬ್ಬ ಗಂಡು ಮಗುವಿಗೂ ನೀನು ಸುನ್ನತಿ ಮಾಡಿಸಬೇಕು" ಎಂದು ಸಹ ಹೇಳಿದನು.
"ನಿನ್ನ ಹೆಂಡತಿಯಾದ, ಸಾರಯಳು ಮಗನನ್ನು ಪಡೆಯುವಳು - ಅವನು ವಾಗ್ದಾನ ಮಗನಾಗಿರುತ್ತಾನೆ, ಅವನಿಗೆ ಇಸಾಕ್ ಎಂದು ಹೆಸರಿಡು, ನಾನು ಅವನೊಂದಿಗೆ ನನ್ನ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ ಮತ್ತು ಅವನು ದೊಡ್ಡ ಜನಾಂಗವಾಗುವನು. ನಾನು ಇಸ್ಮಾಯೇಲನನ್ನು ಸಹ ದೊಡ್ಡ ಜನಾಂಗವನ್ನಾಗಿ ಮಾಡುವೆನು, ಆದರೆ ನನ್ನ ಒಡಂಬಡಿಕೆಯು ಇಸಾಕನೊಂದಿಗೆ ಇರುತ್ತದೆ" ಅಂದನು. ಆಗ ದೇವರು ಅಬ್ರಾಮನ ಹೆಸರನ್ನು ಅಬ್ರಹಾಮ್ ಎಂದು ಬದಲಿಸಿದನು, "ಬಹುಜನರ ತಂದೆ" ಎಂಬುದು ಇದರರ್ಥವಾಗಿದೆ. ದೇವರು ಸಾರಯಳ ಹೆಸರನ್ನು ಸಾರಾ ಎಂದು ಬದಲಿಸಿದನು, ಅಂದರೆ "ರಾಣಿ" ಎಂದರ್ಥ.
ಆ ದಿನದಲ್ಲಿ ಅಬ್ರಹಾಮನು ತನ್ನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೆ ಸುನ್ನತಿಮಾಡಿಸಿದನು. ಸುಮಾರು ಒಂದು ವರ್ಷದ ನಂತರ, ಅಬ್ರಹಾಮನು 100 ವರ್ಷ ವಯಸ್ಸಿನವನಿದ್ದಾಗ ಮತ್ತು ಸಾರಳು 90 ವರ್ಷ ವಯಸ್ಸಿನವಳಾಗಿದ್ದಾಗ, ಸಾರಳು ಅಬ್ರಹಾಮನ ಮಗನಿಗೆ ಜನ್ಮವಿತ್ತಳು. ದೇವರು ಅವರಿಗೆ ಮಾಡಬೇಕೆಂದು ಹೇಳಿದಂತೆಯೇ ಅವರು ಅವನಿಗೆ ಇಸಾಕ್ ಎಂದು ಹೆಸರಿಟ್ಟರು.
ಇಸಾಕನು ಯುವಕನಾಗಿದ್ದಾಗ, "ನಿನ್ನ ಏಕೈಕ ಮಗನಾದ ಇಸಾಕನನ್ನು ಕರೆದುಕೊಂಡು ಹೋಗಿ ಅವನನ್ನು ನನಗೆ ಯಜ್ಞವಾಗಿ ವಧಿಸು" ಎಂದು ಹೇಳುವುದರ ಮೂಲಕ ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಮತ್ತೆ ಅಬ್ರಹಾಮನು ದೇವರಿಗೆ ವಿಧೇಯನಾಗಿ ತನ್ನ ಮಗನನ್ನು ಅರ್ಪಿಸಲು ಸಿದ್ಧಮಾಡಿಕೊಂಡನು.
ಅಬ್ರಹಾಮನು ಮತ್ತು ಇಸಾಕನು ಯಜ್ಞದ ಸ್ಥಳಕ್ಕೆ ನಡೆದುಕೊಂಡು ಹೋಗುವಾಗ, ಇಸಾಕನು, "ಅಪ್ಪಾ, ಯಜ್ಞಕ್ಕೆ ಬೇಕಾದ ಕಟ್ಟಿಗೆಯೂ ಉಂಟು; ಆದರೆ ಕುರಿಮರಿ ಎಲ್ಲಿ?" ಎಂದು ಕೇಳಿದನು. ಅಬ್ರಹಾಮನು, "ಮಗನೇ, ಯಜ್ಞಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು" ಎಂದು ಉತ್ತರಕೊಟ್ಟನು.
ಅವರು ಯಜ್ಞದ ಸ್ಥಳವನ್ನು ತಲುಪಿದಾಗ, ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಕಟ್ಟಿ ಯಜ್ಞವೇದಿಯ ಮೇಲೆ ಮಲಗಿಸಿದನು. ಅವನು ತನ್ನ ಮಗನನ್ನು ಕೊಲ್ಲುವುದಕ್ಕಿದ್ದಾಗ, ದೇವರು, "ನಿಲ್ಲಿಸು! ಹುಡುಗನಿಗೆ ಹಾನಿಮಾಡಬೇಡ! ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸುವುದಕ್ಕೆ ಹಿಂಜರಿಯಲಿಲ್ಲವಾದುದರಿಂದ ಈಗ ನೀನು ನನ್ನಲ್ಲಿ ಭಯಭಕ್ತಿಯುಳ್ಳವನು ಎಂದು ನನಗೆ ಗೊತ್ತಾಯಿತು" ಎಂದು ಹೇಳಿದನು.
ಅಬ್ರಹಾಮನು ಹತ್ತಿರವಿರುವ ಪೊದೆಗಳಲ್ಲಿ ಸಿಲುಕಿರುವ ಒಂದು ಟಗರನ್ನು ಕಂಡನು. ಇಸಾಕನಿಗೆ ಬದಲಾಗಿ ಯಜ್ಞವಾಗಿ ಅರ್ಪಿಸಲು ದೇವರು ಟಗರನ್ನು ಒದಗಿಸಿಕೊಟ್ಟನು. ಅಬ್ರಹಾಮನು ಸಂತೋಷದಿಂದ ಈ ಟಗರನ್ನು ಯಜ್ಞವಾಗಿ ಅರ್ಪಿಸಿದನು.
ಆಗ ದೇವರು ಅಬ್ರಹಾಮನಿಗೆ, "ನೀನು ನನಗೆ ಎಲ್ಲವನ್ನೂ ಕೊಡಲು, ನಿನ್ನ ಏಕೈಕ ಮಗನನ್ನು ಸಹ ಕೊಡಲು ನೀನು ಸಿದ್ಧನಾದುದರಿಂದ, ನಾನು ನಿನ್ನನ್ನು ಆಶೀರ್ವದಿಸುವೆನೆಂದು ವಾಗ್ದಾನ ಮಾಡುತ್ತೇನೆ. ನಿನ್ನ ಸಂತತಿಯವರು ಆಕಾಶದಲ್ಲಿರುವ ನಕ್ಷತ್ರಗಳಿಗಿಂತ ಹೆಚ್ಚಾಗಿರುವರು, ನೀನು ನನಗೆ ವಿಧೇಯನಾದ ಕಾರಣ ನಾನು ನಿನ್ನ ಕುಟುಂಬದ ಮೂಲಕ ಲೋಕದ ಎಲ್ಲಾ ಕುಟುಂಬಗಳನ್ನು ಆಶೀರ್ವದಿಸುವೆನು" ಎಂದು ಹೇಳಿದನು.